ನಮ್ಮ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕದ ಪಾಠ ಹೇಳಿಕೊಡುವಾಗ ಅಲ್ಲೊಂದ್ ಇಲ್ಲೊಂದ್ ದಿನಗಳಲ್ಲಿ ಅವರಿಗೆ ಕೆಲಸಕ್ಕೆ ಬರೋ ಕೆಲವು ವಿಚಾರ ಚರ್ಚೆಗೆ ಬರುತ್ತವೆ.ಅವರು ಒಳ್ಳೆಯ ಮೂಡಲ್ಲಿದ್ದು ಆಸಕ್ತರಾಗಿ ಕೇಳುವಾಗ ಒಳ್ಳೆಯ ಉದಾಹರಣೆ, ಅನುಭವಗಳೂ ಹತ್ತಾರು ವಿಷಯಗಳೂ ಹಂಚಿಕೊಳ್ಳುವುದೂ ಉಂಟು. ಒಳ್ಳೆಯ ಮೂಡ್ನಲ್ಲಿ ಇದ್ದಾಗ ಮಕ್ಕಳಿಗೆ ತಿಳಿಹಾಸ್ಯದ ಚಟಾಕೆಯನ್ನೂ ಹಂಚಿಕೊಳ್ಳುವ ಪ್ರಮೇಯ ಬಂದಿದೆ. ವಾರಾಂತ್ಯದಲ್ಲಿ ಮಾತ್ರ ನಡೆಯುವ ನಮ್ಮ ಶಾಲೆಯ ಮಕ್ಕಳು ಒಮ್ಮೊಮ್ಮೆ ಕೊಟ್ಟ ಮನೆಕೆಲಸ ಮಾಡದೇ ಬರುವುದು,ನಂತರ ಅವರು ತರಗತಿಯಲ್ಲಿ ಕುಳಿತು ತಿಣುಕುವಾಗ ನಮಗೆ ಅರ್ಥವಾಗುತ್ತದೆ ಅವರ ಕಷ್ಟ. ಅವರು ಹೋಮ್ ವರ್ಕ್ ಮಾಡದಿದ್ದಕ್ಕೆ ಕೊಡುವ ಕಾರಣಕ್ಕೆ ನಮ್ಮಲ್ಲಿ ಉತ್ತರವೇ ಇರುವುದಿಲ್ಲ. ಹೀಗಿದ್ದಾಗ ಉಪಾಯ ಮಾಡಿ ಆಗಿಂದಾಗ್ಗೆ ಒಂದು ಪುಟ್ಟ ಚಟುವಟಿಕೆ ನಡೆಸಲಾಗುವುದು. ಇದನ್ನು ಪೋಷಕರು ವರ್ಷಕ್ಕೊಮ್ಮೆ ನಮ್ಮನ್ನು ಭೇಟಿಮಾಡಲು ಬಂದಾಗಲೂ ಅವರ ಮೇಲೂ ಪ್ರಯತ್ನ ಮಾಡಿರುವುದು ಉಂಟು. ಆ ಚಟುವಟಿಕೆ ಕಷ್ಟದ್ದೇನಿಲ್ಲ, ಬಹಳ ಸುಲಭವಾದದ್ದೇ.
ಅವರಿಗೆ ದೊಡ್ಡ ಗೋಡೆ ಗಡಿಯಾರದ ಸೆಕೆಂಡ್ ಮುಳ್ಳನ್ನು ಕಣ್ಣು ಮಿಟುಕಿಸದೆ ಒಂದು ನಿಮಿಷ ನೋಡುಲು ಹೇಳುವುದು. ಅವರು ಗಡಿಯಾರ ನೋಡುವಾಗ ನಾವು ಅವರನ್ನು ನೋಡುವುದೇ ಒಂದು ಮಜ. ೩೫,೩೬,೩೭ ಅಯ್ಯೋ ಇದೇನು ಒಂದು ನಿಮಿಷ ಮುಗಿತಾನೆ ಇಲ್ಲವೇ, ಕೆಲವರಿಗೆ ಕಣ್ಣಲ್ಲಿ ನೀರು,ಹುಶ್ಶಪ್ಪಾ,ಸಾಕಾಯ್ತು…… ಇನ್ನೂ ಏನೇನೋ ಕೇಳಿಬರುತ್ತದೆ. ಆ ಸಮಯದಲ್ಲಿ ಮತ್ತೊಬ್ಬರು ಬೋರ್ಡಿನ ಮೇಲೆ ಸಾಧ್ಯವಾದಷ್ಟು ಸಂಖ್ಯೆ ಒಂದನ್ನು ಗೀಚುತ್ತಿರುವುದು. ಅಬ್ಭಾ ಮುಗಿತು, ಏನು ಈ ಆಟದ ಫಲಿತಾಂಶ ಎಂದು ಅವರ ತಲೆಯಲ್ಲಿ ಅನ್ನಿಸುತ್ತಿರುವಾಗ. “ನೋಡಿದ್ರಾ ಒಂದು ನಿಮಿಷ ಕಳೆಯೋದು ಎಷ್ಟು ಹೊತ್ತು ಹಿಡಿಯುತ್ತೆ?” ಅಂತ ಹೇಳಿ. ಗೀಚಿದ ಗೆರೆಗಳ ಸಂಖ್ಯೆ ತೋರಿಸಿದಾಗ ಅವರ ಕಣ್ಣರಳುತ್ತದೆ, ಹಾಗಾದರೆ ಒಂದು ನಿಮಿಷದಲ್ಲಿ ಎಷ್ಟು ಪದ ಓದಬಹುದು, ಬರೆಯಬಹುದು, ಎಷ್ಟು ಹೆಜ್ಜೆ ಹಾಕಬಹುದು? ಎಂದೆಲ್ಲಾ ಹೇಳಿದಾಗ ಹುಬ್ಬೇರುತ್ತದೆ. “ಒಂದು ನಿಮಿಷ ಅರೆ! ಅರವತ್ತು ಸೆಕೆಂಡು? ಎಷ್ಟು ಸಮಯ?” ಎಂದವರು ಗುನುಗುತ್ತಿರಲು ಕೂಡಲೇ ಅವರಿಗೆ ಹೀಗೊಂದು ಪ್ರಶ್ನೆ ಎಸೆದಾಗ ತಲೆಯಾಡಿಸದೆ ಇರುವುದಿಲ್ಲ. ಮಕ್ಕಳು ಶಾಲೆ ಮುಗಿಸಿ ಸಾಮಾನ್ಯವಾಗಿ ಮನೆಗೆ ಬರುವುದು ಸಂಜೆ ೪ಕ್ಕೆ. ಮಲಗುವುದು ರಾತ್ರಿ ಹತ್ತಕ್ಕೆ.ಅಲ್ಲಿಗೆ ಒಟ್ಟು ಆರು ಘಂಟೆ, ಅದರಲ್ಲಿ ಒಟ್ಟು ಎಷ್ಟು ನಿಮಿಷ ಇದೆ ೩೬೦ !! ಅದರಲ್ಲಿ ಊಟ, ಆಟ, ಪಾಠ, ಟಿವಿ ಎಲ್ಲಾ ಕಳೆದರೂ ಇನ್ನೂ ಎರಡು ಘಂಟೆ ಉಳಿದಿದೆ ಅರೆ! ಹಾಗಾದರೆ ಎಷ್ಟು ಸಮಯ ನಾವು ವ್ಯರ್ಥ ಮಾಡಿದ್ದೇವೆ ಈ ವರೆಗೆ ? ಎಂಬ ಆಶ್ಚರ್ಯ ಆತಂತ ಅವರ ಮುಖದಲ್ಲಿ ಎದ್ದು ಸೋತು ಗೆದ್ದವರಂತೆ ಮುಗುಳ್ನಗೆ ಕಾಣುತ್ತದೆ. ದಿನಕ್ಕೆ ಎಷ್ಟು ಸಮಯ ನಾನ್ ಸೆನ್ಸ್ ನಲ್ಲೇ ಕಳೆಯಿತಲ್ಲ. “ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂದು ಕನವರಿಸುತ್ತಾ “ಟೈಮ್ ಈಸ್ ಮನಿ” ಎಂದು ತಿಳಿದು ಮುಂದೆ ಎಲ್ಲರೂ ಸಮಯದ ಸದುಪಯೋಗ ಮಾಡಿಕೊಳ್ಳುವರೆಂಬ ಆಶೆಯಿಂದ ಈ ಪುಟ್ಟ ಲೇಖನ ತಮಗೆ ಅರ್ಪಣೆ. ಉಪಯೋಗ ಅನ್ನಿಸಿದಲ್ಲಿ ಹಂಚಿಕೊಳ್ಳಿ. ಇದಾದ ನಂತರ ಮಕ್ಕಳಲ್ಲಿ ಬದಲಾವಣೆ ಕಂಡದ್ದು ಖಂಡಿತ.