ನೋಟ ಪರರಿಚ್ಚೆ ಊಟ ನಮ್ಮಿಚ್ಚೆ ಹೀಗೊಂದು ಗಾದೆ ಕನ್ನಡದಲ್ಲಿ ಕೇಳಿದ್ದೋರಿಗೆ ಗೊತ್ತು.
ಒಳ್ಳೆಯ ನಡತೆ ಉಳ್ಳ ಮಕ್ಕಳನ್ನು ಕಂಡಾಗ ‘ಯಾವ್ ಸ್ಕೂಲ್ ಹೋಗ್ತಾರೆ’ ಅಂತ ಕೇಳುವುದು ಸಹಜ.ಆದರೆ ಒಳ್ಳೆಯ ನಡತೆಗಳೆಲ್ಲಾ ಶಾಲೆಯಿಂದಲೇ ಬರುವಂಥದ್ದಲ್ಲ. ನೋಡಿ ತಿಳಿದದ್ದೋ,ಕಂಡು ಅರಿತದ್ದೋ ಅಥವಾ ಸ್ವಶಕ್ತಿಯಿಂದ ಅನುಭವಿಸಿ ಕಲಿತ ವಿದ್ಯೆಯೂ ಅಪಾರ ಗುಣಗಾನ ಪಡೆಯುತ್ತವೆ. ತಾಳ್ಮೆ,ಶ್ರದ್ಧೆ, ಭಯ, ಭಕ್ತಿ, ವಿನಯ ಹೇಳಿಕೊಟ್ಟು ಬರುವ ವಿದ್ಯೆ ಅಂತ ಸಂಪೂರ್ಣ ಒಪ್ಪಲೂ ಸಾಧ್ಯವಿಲ್ಲ. ವಯಸ್ಸು ಆಗ್ತಾ ಅನುಭವದಿ ಗಳಿಸುವ ಪಕ್ವತನವೇ ಬೇರೆ.
ಪಟ್ಟಿ ಮಾಡ್ತಾ ಹೋದರೆ, ಲೆಕ್ಕವಿಲ್ಲದಷ್ಟು ವಿಚಾರಗಳು ವಯಸ್ಸಾದರೂ ಅರಿವಿಗೆ ಬಾರದೇ ಇರುವುದು ನಮ್ಮ ಕಣ್ಮುಂದೆ ನಡೆಯುತ್ತಲೇ ಇರುತ್ತವೆ.
ಈ ದಿನ ಮೊದಲ (ಶಾಲೆ ಕಲಿಸದ) ಪಾಠದಲ್ಲಿ ಸಭ್ಯತೆಯಿಂದ ಊಟಮಾಡುವ ವಿಚಾರ ತೆಗೆದುಕೊಳ್ಳೋಣ. ನಾವು ಸಣ್ಣವರಾಗಿದ್ದಾಗ ಮನೆಯವರೆಲ್ಲರ ಜೊತೆ ನೆಲದ ಮೇಲೆ ಕುಳಿತು ತಟ್ಟೆ, ಎಲೆಯ ಮೇಲೆ ಊಟ ಬಡಿಸಿಕೊಂಡು ಉಂಡದ್ದು ನೆನಪಿಗೆ ಬರುತ್ತದೆ. ಆಗ ಊಟದ ಸಮಯಕ್ಕೆ ಎಲ್ಲರೂ ಕೂಡಿ, ಊಟ ಮಾಡುವಾಗ ಅಮ್ಮ,ಅಜ್ಜಿ,ಅಕ್ಕ,ಅಪ್ಪ “ಏಯ್ ಅದು ಮುಸುರೆ,ಇದು ಎಂಜಲು, ಕೈತೊಳ್ಕೋ, ನಿಧಾನಕ್ಕೆ ಅಗೆದು ತಿನ್ನು, ತರಕಾರಿ ಬೇಡಾ ಅನ್ಬಾರ್ದು” ಅಂತೆಲ್ಲಾ ಇನ್ನೂ ಅವರವರ ಅನುಭವಕ್ಕೆ ಏನೇನೋ ನೆನಪಿಗೆ ಬರುತ್ತದೆ.ಅದೆಲ್ಲಾ ಸಾಮಾನ್ಯ ಎಲ್ಲರ ಮನೆಯಲ್ಲೂ ಕೇಳುವ ವಿಷಯ ಅಂತೀರಾ, ಒಮ್ಮೆ ದೊಡ್ಡಬಳ್ಳಾಪುರದ ಬಳಿ ಜಕ್ಕಸಂದ್ರ ಎಂಬ ಊರಿಗೆ ನನ್ನ ಗೆಳೆಯ ಸುಬ್ಬು ಅವರ ಊರಿಗೆ ನನ್ನ ಆಪ್ತ ಶಾಸ್ತ್ರಿ ಜೊತೆ ಪೂಜೆಯೊಂದರ ಊಟಕ್ಕೇ ಅಂತಲೇ ಹೋಗಿದ್ದಾಗ.ಅಲ್ಲಿದ್ದ ಪುರೋಹಿತರು ಊಟದ ಸಮಯದಲ್ಲಿ (ಸಮೂಹ ಗೀತೆ) ಊಟದ ಹಾಡೊಂದನ್ನು ಶುರುಮಾಡಿದ್ರೂ ನೋಡಿ,,,, ಅದರಲ್ಲಿ ಎಲ್ಲಾ ಭಕ್ಷಗಳ ಹೆಸರೂ ಇದ್ದವು “ಶೇಷಾದ್ರೀಶನ ಚರಣಕೆ ನಮಿಸುತ,ಶ್ರೀಹರಿಯ ಆಂತರ್ಯದಿ ಭಜಿಸುತ ಅಂತ ಶುರುವಾಗಿ,………ಗರಗಲು ರೊಟ್ಟಿಯ ಗರುಡಾಚಾರ್ರೆ, ಮುರುಕಲು ರೊಟ್ಟಿಯ ಮುರುಗಾಚಾರ್ರೆ, ಶಾವಿಗೆ ತಂದ ಶಾಂತಮ್ನೋರೆ, ಪೇಣಿಯತಂದರು ಪದ್ಮಮ್ಮ್ನೋರು..”
ಹೀಗೇ ಹಾಡು ಎಷ್ಟು ಸೊಗಸಾಗಿ ಹಾಡಿದರೋ, ಅಷ್ಟೇ ಸೊಗಸಾಗಿ ಎಲೆ ಮೇಲೆ ಬಡಿಸಿದ್ದೆಲ್ಲಾ ಕೂಡಾ ಖಾಲಿ ಮಾಡಿದ್ರು ಒಂದು ಅಗಳು ಅನ್ನ ಹುಡುಕಿದರೂ ಚೆಲ್ಲಿರಲಿಲ್ಲ. ಅದಪ್ಪಾ ಊಟ ಮಾಡೋದು ಅಂದ್ರೆ, ನಗುನಗುತ್ತಾ ನಿಧಾನಕ್ಕೆ,ಚೂರೂ ಚೆಲ್ಲದೆ,ಚೂರೂ ಅಸಭ್ಯ ಶಬ್ಧ ಮಾಡದೇ,ಬೆರಳೆಲ್ಲಾ ನೆಕ್ಕದೇ ಅವರನ್ನು ನೋಡ್ತಿದ್ರೆ ನಮಗೂ ಒಂದೆರೆಡು ತುತ್ತು ಒಳಗೆ ಇಳಿಯುತ್ತೆ.
ಆದ್ರೆ ಇಲ್ನೋಡಿ ಈಗಿನ ಮಕ್ಳು ಊಟ ಮಾಡೋಣಾ ಅಂದ್ರೆ pizzaa,burger,chips ಅಂತಾರೆ. ಎಡ-ಬಲವಿಲ್ಲದೆ ಎರಡೂ ಕೈಗಳಿಂದ ಸ್ವಚ್ಚಂದವಾಗಿ ದೋಸೆ – ಚಪಾತಿ ಹರ್ಕೊಂಡ್ ತಿಂತಾರೆ.”ಅಯ್ಯೋ ಏನ್ ಮಾಡೋದು ಮಗು ತಿಂದರೆ ಸಾಕು”ಅನ್ನೋ ತಾಯಂದಿರನ್ನ ಅದೆಷ್ಟು ನೋಡಿಲ್ಲ ನಾವು? ಮೊನ್ನೆ ಒಬ್ಬರ ಮನೆಗೆ ಹೋಗಿದ್ವಿ ಅಲ್ಲಿ ಮಕ್ಕಳು ಇರ್ಲಿ ದೊಡ್ಡವರೇ ಒಬ್ರು ರೊಟ್ಟಿ/ಚಪಾತಿಯನ್ನು ಕಚಕ್ ಪಿಚಕ್ ಅಗೆಯುವ ಶಬ್ದಕ್ಕೆ ಮಕ್ಕಳೆಲ್ಲಾ ಮೆಲ್ಲಗೆ ರೂಮಿಗೆ ಜಾರಿಕೊಂಡ್ರು. ಸರಿ ನಾವಿನ್ನೇನ್ ಮಾಡೋದು? ಆ ಶಬ್ದಕ್ಕಿಂತಾ ಜೋರಾಗಿ ಮಾತಾಡುವ ಪ್ರಮೇಯ ಬಂತು.ಕ್ರಮೇಣ ಆ ಮಹಾನುಭಾವರ ಊಟ ಮುಗಿದಮೇಲೆ ಎಲ್ಲರೂ ಮಾಮೂಲು ದ್ವನಿಯಲ್ಲಿ ಮಾತಾಡುತ್ತಿದ್ದರು. ಬಹಳ ಮಂದಿಗೆ ಹೀಗೆ ಕಚಕ್ ಪಿಚಕ್ ಕೇಳುತ್ತಾ ಕೂರುವುದು ಕಷ್ಟವೇ ಸರಿ. ಆದರೆ ಹೇಳೋಕ್ಕೆ ನಾವ್ಯಾರು? ಏನ್ಂದ್ಕೊಂತಾರೋ ಅಂತ ಕೂತ್ರೆ ನಮಗೇ ಸಂಕಟ.
ಆದ್ರೆ ಇಲ್ಲೊಂದ್ ನ್ಯೂಸ್ ನೋಡಿ ಸಿನಿಮಾದಲ್ಲಿ ಕುಳಿತು ಪಾಪ್ ಕಾರ್ನ್ ತಿಂತಾ ಹೀಗೇ ಪಕ್ಕದವರಿಗೆ ತಡೆಯಲಾರದಷ್ಟು ಜೋರಾಗಿ ಜೋಳ ಜಗೀತಿದ್ದವನ ಶಬ್ಧ ತಾಳರಾರದೆ ಮತ್ತೊಬ್ಬ ತನ್ನ ಪಿಸ್ತೂಲಿನಿಂದ ಢಂ ಅನ್ನಿಸೇ ಬಿಟ್ಟನಂತೆ. ಭರಭರ,ಸರಸರ ತಿನ್ನುವುದರಂತೇ, ತಾಳ್ಮೆ ಕೂಡಾ ಶಾಲೆ ಕಲಿಸದ ಪಾಠವೇ.
>> A lawyer who shot another man dead in a Riga cinema over an argument about munching too loudly on popcorn was sentenced on Tuesday to 17 years in prison.ಆ news ಪೂರ್ತಿ ಇಲ್ಲಿದೆ ಓದಿ.<<
ಲೋಕೊಭಿನ್ನ ರುಚಿಹಿ ಅನ್ನೋ ಹಾಗೆ ನಿಮ್ಮ ಲೇಖನ ಮೂಡಿಬಂದಿದೆ.
ನಾಗೇಂದ್ರ
Exactly, if the title conveys the msg on the article I`m happy