ಕಮ್ ಜಾತಿ ಜನ

ಸವಿ ನೆನಪುಗಳು ಹೇಗೆ ಅಳಿಯದೇ ಉಳಿಯುತ್ತವೆಯೋ ಹಾಗೇ ಕಹಿ ನೆನಪೂ ಕೂಡಾ.ನನ್ನ ಒಂದು ಅಂಥಾ ನೆನಪು ಹಂಚಿಕೊಳ್ಳುವ ಪ್ರಯತ್ನ ಈ ಪೋಸ್ಟ್. ನಾವು ಸುಖದಲ್ಲಿದ್ದಾಗ ಕಹಿ ಅನುಭವವನ್ನು ದೂಶಿಸಿ ದೂರ ಇಡುತ್ತೇವೆ, ಮರೆತೂ ಬಿಡುತ್ತೇವೆ ಅದೇ ಕಷ್ಟದಲ್ಲಿರಲು ಆ ಘಟನೆ ಅನುಭವವಾಗಿ ಅದರಿಂದ ಪಾಠಾನೋ, ನೀತಿನೋ ಕಲಿತಿರಲೂ ಬಹುದು. ಅಚ್ಚಳಿಯದೇ ಉಳಿದ ಅಂತಹ ಒಂದು ನೆನಪು ಇದು.

bike
ಸುಮಾರು ಎರಡೂವರೆ ದಶಕದ ಹಿಂದಿನ ವಿಷಯ. ಒಮ್ಮೆ ನನ್ನ ಅಣ್ಣ (ಭಕ್ತ ವತ್ಸಲ) ಮತ್ತು ಅವನ ಗೆಳೆಯರ ಜೊತೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ (Up & down) ಮೂರೇ ದಿನಗಳಲ್ಲಿ  ! ಸೈಕಲ್ ಸವಾರಿ ಮಾಡುವ ಸಾಹಸ ನಾನು ಮಾಡಿದೆ. ಆ ಮೊದಲು ನನ್ನ ಗೆಳೆಯರ ಜೊತೆ (ಈಗ ಸಿಡ್ನಿಯಲ್ಲೂ ಇದ್ದು ಸಂಪರ್ಕದಲ್ಲಿದ್ದಾರೆ) ಕರ್ನಾಟಕದ ಸಾಕಷ್ಟು ಜಿಲ್ಲೆಗಳನ್ನು ಸುತ್ತಿ ಬಂದಿದ್ದೆ,ಅದರಿಂದ ನನಗೂ ಸೈಕಲ್ ತುಳಿಯುವ ಶಕ್ತಿ ಇದೆ ಅಂತ ಈ ಪ್ರವಾಸಕ್ಕೆ ಧೈರ್ಯ ಮಾಡಿದೆ.ನನ್ನ ಅಣ್ಣನ ಗೆಳೆಯರು ನನಗಿಂತ ಮೂರು-ನಾಲ್ಕು ವರ್ಷ ಹಿರಿಯರು, ಆ ಗುಂಪಿನಲ್ಲಿ ನಾನೇ ಕಿರಿಯ, ಎಲ್ಲರೂ ಗರಡಿಮನೆ ಪೈಲ್ವಾನರು ಇದ್ದಹಾಗೆ ಇದ್ದರು. ಸರಿ ಮೊದಲ ದಿನವೇ ಬೆಂಗಳೂರಿನಿಂದ ಹೊರಟು ಸಕಲೇಶಪುರ (235km) ತಲುಪುವ ಯೋಜನೆ! ಬೆಳಿಗ್ಗೆ ಐದಕ್ಕೇ ಬೆಂಗಳೂರು ಬಿಟ್ಟು ಕುಣಿಗಲ್ ಏಳರ ಹೊತ್ತಿಗೇ ತಲುಪಿದೆವು. ಏನು ರೇಸಿಂಗೋ ರೇಸಿಂಗು ಚಳಿಗೆ, ಮೊದಲ ದಿನದ ಹುರುಪಿಗೆ, ಯಾರಿಗೂ ಸುಸ್ತು ಅನ್ನಿಸಲಿಲ್ಲ. ಹಳ್ಳಿಯ ಚಿಕ್ಕ ಹೋಟೆಲೊಂದರಲ್ಲಿ ಗಡದ್ದಾಗಿ ಇಡ್ಲಿ ವಡೆ ಬಾರಿಸಿ ಮುಂದೆ ಸಾಗಿದೆವು ಅಕಸ್ಮಾತ್ ನಾನು ನನ್ನ ನೀರಿನ ಬಾಟಲ್ ನ್ನು ಕುಣಿಗಲ್ ನಲ್ಲಿ ತಿಂಡಿ ತಿನ್ನುವಾಗ ಅಲ್ಲೇ ಬಿಟ್ಟು ಮರೆತು ಬಂದೆ, ಸುಮಾರು ಇಪ್ಪತ್ತು ಕಿ ಮೀ ತಲುಪುವ ವೇಳೆಗೆ ಬಿಸಿಲು, ಗಾಳಿಗೆ ದೇಹ ದಣಿದು ನೀರು ಬೇಕನಿಸಿತು, ನೀರಿನ ಬಾಟಲ್ ತಡಕಾಡಿದೆ ಎಲ್ಲಿ? ಕುಣಿಗಲ್ ನಲ್ಲೇ ಬಿಟ್ಟು ಬಂದಿದ್ದೆ, ಸಹ-ಸವಾರರನ್ನು ಕೇಳೋಣವೆಂದರೆ ಆ ಕ್ಷಣ ನಾನು ಹಿಂದೆ ಉಳಿದಿದ್ದೆ ನನಗೆ ಅವರು ಕಂಡರೂ ಕೂಗಿದರೆ ಕೇಳದಷ್ಟು ದೂರವಿದ್ದರು.ಬೆಗ ಅವರನ್ನು ತಲುಪುವ ಆಸೆಯಿಂದ ಜೋರಾಗಿ ಪೆಡಲ್ ತುಳಿದೆ,ದಣಿವಾಯಿತೇ ಹೊರತು ಅವರನ್ನು ಮುಟ್ಟಲಿಲ್ಲ.
madake1

ಸರಿ ಅಲ್ಲೇ ಪಕ್ಕದಲ್ಲಿ ಪುಟ್ಟ ಹಳ್ಳಿ ಕಂಡಿತು. ನನ್ನ ಅದೃಷ್ಟಕ್ಕೆ ಒಬ್ಬ ಬಡ ಹುಡುಗ ಅವನ ಚಿಕ್ಕ ಮನೆಯ ಬಾಗಿಲಿಗೆ ಒರಗಿ ನಿಂತಿದ್ದ. ಸೈಕಲ್ ನಿಲ್ಲಿಸಿ “ಏ ಹುಡುಗಾ ಒಂದ್ ಲೋಟ ನೀರು ಕೊಡ್ತೀಯಾ?” ಅಂತ ಕೇಳಿದೆ, ಹುಡುಗ ನನ್ನ ಮುಖ ನೋಡಿ ಅರೆ ಕ್ಷಣ ಸುಮ್ಮನಿದ್ದು ನಂತರ ಒಳಗೆ ಹೋಗಿ ನೀರು ತಂದ, ಪುಟ್ಟ ಮಡಕೆ…. ಪರವಾಗಿಲ್ಲ ಮಡಕೆಯಲ್ಲಿ ಕುಡಿಯುವ ಲಕ್ ಇವತ್ತು ಅಂತ ನಾನೂ ಅವನ ಮನೆಯಕಡೆಗೆ ಹೆಜ್ಜೆ ಹಾಕಿದೆ,ಅವನೂ ನನ್ನಕಡೆ ಬರುತ್ತಿದ್ದ. ಅಷ್ಟರಲ್ಲಿ ಎಲ್ಲಿಂದಲೋ ಒಬ್ಬ ಹಿರಿಯ ಗಂಡಸು ಓಡಿಬರುತ್ತಾ “ಏಯ್ ಏಯ್ ಓಗಾ… ಓಗಾ…. ಓಗಾಲೈ” ಅಂತ ಗಟ್ಟಿಯಾಗಿ ಪ್ರಾಣಿಯನ್ನು ಅಟ್ಟುವಂತೆ ಅರಚಿದ. ನನಗೆ ಭಯವಾಯಿತು ಇದೇನಪ್ಪ ನೀರು ಕುಡಿಯೋಕ್ಕೆ ಬಂದ್ರೆ ಹಿಂಗಾಡ್ತಾರೆ ಅಂದ್ಕೊಡೆ,ಆದರೆ ಅಲ್ಲಿ ನಡೆದದ್ದೇ ಬೇರೆ. ಆತ ಓಗಾ ಓಗಾಲೈ ಅಂತ ಗದರಿದ್ದು ಆಪುಟ್ಟ ಹುಡುಗನ್ನ. ಆ ಪುಟ್ಟ ಹುಡುಗ ಮಡಕೆ ಹಿಡಿದು ಬಂದ ಕಡೆಗೆ ಹಿಂತಿರುಗಿ ನಡೆದು ತನ್ನ ಮನೆಯೊಳಕ್ಕೆ ಹೋದ, ಈತ ಕೂಡಾ ಬಂದ ಕಡೆಗೆ ತಿರುಗಿ ಹೊರಟ, “ಏನ್ ಸ್ವಾಮೀ…. ನನಗೆ… ಬಾಯಾರಿಕೆ…. ಅವನು…. ನೀರು….” ಅಂತ ಹೇಳುವಷ್ಟರಲ್ಲಿ ಆತ ಹೇಳಿದ್ದು ಒಂದೇ ಮಾತು “ಅವ್ರು ಕಮ್ ಜಾತಿ ಸಾಮೀ ಓಗಿ “* ಅಷ್ಟೇ ! ನಾನು ಅರೆಕ್ಷಣ ಬೆಪ್ಪಾಗಿ ನಿಂತೆ, ನಾನು ಕುಡಿಯೋಕ್ಕೆ ರೆಡಿ ಇರೋನೇ……….ಅಂತ ಹೇಳೋಕ್ಕೆ ಹೊರಟಿದ್ದೆ, ಅವನು ದೂರಕ್ಕೆ ಹೋಗುವ ಮೊದಲೇ ಭಿಕ್ಷದೋರ್ ಥರ “ಸ್ವಾಮೀ ನೀರು?” ಅಂತ ಆಶ್ಚರ್ಯದಿಂದ ಕೇಳಿದೆ. ಅದಕ್ಕೆ ಆತ ಉತ್ತರಿಸಲೇ ಇಲ್ಲ. ಅಲ್ಲಾ ತಾನೂ ಕೊಡಲಿಲ್ಲ ಹುಡುಗ ಕೊಡುವುದನ್ನೂ ತಪ್ಪಿಸಿದ ! ಕಡೆಗೆ ಮುಂದಿನ ಊರಲ್ಲಿ ನಾನೇ ಬೋರ್ ವೆಲ್ ಪಂಪ್ ಒತ್ತಿ ಬೊಗಸೆ ಹಿಡಿದು ಕುಡಿದಿದ್ದಾಯ್ತು.ಆದರೆ ಆ ಘಟನೆ ಮಾತ್ರ ಇಂದಿಗೂ ಮರೆತಿಲ್ಲ. ಜಾತಿ ಕೀಳರಿಮೆ ಎಷ್ಟರ ಮಟ್ಟಿಗೆ ಹಳ್ಳಿಗಳಲ್ಲಿ ಇತ್ತು ಎನ್ನುವ ಅರಿವು ಅಂದು ನನಗಾಯ್ತು. neeru2
ಮಲೆನಾಡಿನ ಗಡಿ ದಾಟಿದಮೇಲೆ ತಿರುವುತಿರುವಿನಲ್ಲೂ ಜಲಪಾತ, ನೀರಿಗೆ ಕೊರತೆಯೇ ಇಲ್ಲ ಬಿಡಿ. ಆ ದಿನ ಸಕಲೇಶಪುರ ಸೇರಬೆಕಿದ್ದ ನಾವು ಎದಿರುಗಾಳಿ ಬಿಸಿಲಿನ ಬೇಗೆಗೆ ಹಾಸನ ಮುಟ್ಟಿದೆವು.ಮತ್ತೆ ಬೆಳಿಗ್ಗೆ ಬೇಗೆದ್ದು ಬೆಳಕು ಹರಿಯುವ ಮುನ್ನ ಸಕಲೇಶಪುರ ತಲುಪಿ ಆರು ಗಂಟೆಯ ಸಮಯದಲ್ಲಿ ಶಿರಾಡಿ ಘಾಟ್ ನಲ್ಲಿ ಚುಮುಚುಮು ಚಳಿಯಲ್ಲಿ ಸುಂದರ ಗಿರಿವನಗಳ ನಡುವೆ ಸೈಕಲ್ ಸವಾರಿ ಮಾಡಿದ್ದು ಮರೆಯಲಾಗದ ಚಿನ್ನದಂತಾ ಅನುಭವ ಚಿತ್ರಣ ಇನ್ನೂ ಮನಸ್ಸಿನಲ್ಲಿ ಮಾಸಿಲ್ಲ.

5 thoughts on “ಕಮ್ ಜಾತಿ ಜನ

  1. ಅನುಭವ ಎನ್ನುವುದು ಹೇಗೆ ಜೀವನದಲ್ಲಿ ಮರೆಯಲಾಗದ ತತ್ವ ತಿಳಿಸುತ್ತದೆ ಎನ್ನುವುದನ್ನು ಕಥಾರೂಪಕವಾಗಿ ಸರಳವಾಗಿ ಪ್ರಸ್ತುತಪಡಿಸಿದ್ದೀರಿ. ಆ ಎಳೆ ವಯಸಿನ ಉತ್ಸಾಹ, ಹಳ್ಳಿಯಲ್ಲಿ ನಡೆದ ಘಟನೆಯನ್ನು ವಿವರಿಸಿ, ಕೊನೆಗೆ ಘಟ್ಟ ಪ್ರದೇಶದ ಸೌಂದರ್ಯದ ಮುಂದೆ ತಂದು ನಿಲ್ಲಿಸಿದ ನಿಮ್ಮ ಶೈಲಿ ಇಷ್ಟವಾಯಿತು.

  2. ಸಮಯದ ಅಭಾವವಿಲ್ಲದೆ, ನಮ್ಮದೇ ಲೋಕ, ನಮ್ಮದೇ ಕಾಲ ಎಂದು ಸುತ್ತುತ್ತಿದ್ದ ಆ ದಿನಗಳು ಎಂಥ ಚೆನ್ನ. ಕಾರಲ್ಲೋ, ವಿಮಾನದಲ್ಲೋ ಬುರ್ರೆಂದು ಹಾರುವುದಕ್ಕಿಂತ,ಪಯಣದುದ್ದಕ್ಕೂ ಕಂಡದ್ದನ್ನೆಲ್ಲಾ ಕುತೂಹಲದಿಂದ ಪರೀಕ್ಷಿಸಿ, ಆಸ್ವಾದಿಸಿ, ಆನಂದಿಸಿ, ಜೀವನ ಪೂರ್ತ ಮರೆಯಲಾಗದಂತ ನೆನೆಪುಗಳ ಮೂಟೆ ಹೇರಿಕೊಂಡು ಅನುಭವಿಸಿದ ಕಾಲ ಮತ್ತೆ ಬರಬಾರದೆ?. ಒಳ್ಳೆಯ ನೆನೆಪಿನ ಕಾಣಿಕೆ ನೀಡಿದ್ದೀರಿ ನಾರಾಯಣ್.

  3. ತಮ್ಮ ಅನುಭವದ ಮುಂದೆ ನಮ್ಮದೇನಿದೆ ನಾಗಶೈಲ,ತಮ್ಮಂತವರ ಸಸ್ನೇಹದಿಂದ ನಮಗೂ ಸೈಕಲ್ ಏರಿ ಈ ರೀತಿ ಅನುಭವ ಪಡೆಯುವ ಸೌಭಾಗ್ಯ, ಪುಣ್ಯ.ಈಗ ಆ ರಸ್ತೆಗಳಲ್ಲಿ ವಾಹನ ಚಲಿಸುವ ವೇಗ ನೋಡಿದರೆ ಭಯವಾಗತ್ತೆ. ನೀವು ದೆಹಲಿಗೆ ಹೋಗಿಬಂದ ನೆನಪು ಬ್ಲಾಗ್ನಲ್ಲಿ ಹಂಚಿಕೊಂಡರೆ ಇನ್ನೂ ಚೆನ್ನ.ಥ್ಯಾಂಕ್ಸ್

ನಿಮ್ಮ ಟಿಪ್ಪಣಿ ಬರೆಯಿರಿ