ಡಿ ವಿ ಜಿ ಅವರ ಬಾಳಿಗೊಂದು ನಂಬಿಕೆ ಪುಸ್ತಕ ಕುರಿತು ಶ್ರೀ ಗುರುರಾಜ ಖರ್ಜಗಿ ನೀಡಿದ ಉಪನ್ಯಾಸ ಮಾಲೆಯಲ್ಲಿ ಒಂದೆಡೆ ಕೇಳಿಬರುವ ಮೂರು ಮುಖ್ಯ ಅಂಶಗಳಾದ ಜೀವನೋತ್ಸಾಹ,ಲೋಕಸ್ನೇಹ ಮತ್ತು ಪುರುಷಪ್ರಯತ್ನ.ಇವುಗಳಲ್ಲಿ ಮೊದಲೆರಡರ ಬಗ್ಗೆ ಪರಿಚಯಿಸುವ ಪ್ರಯತ್ನ ಈ ಮೊದಲಿನ ಪೋಸ್ಟ್ ನಲ್ಲಿ ಮಾಡಿದ್ದೆ, ಈಗ ಕಡೇಯ ವಿಷಯ “ಪುರುಷ ಪ್ರಯತ್ನ”, ಖರ್ಜಗಿಯವ ಅಮೋಘ ವಿವರಣೆಯ ಮಟ್ಟ ತಲುಪಲಾಗದಿದ್ದರೂ ಪರಿಚಯಿಸುವ ಪ್ರಯತ್ನ ಮಾಡುವ ಆಸೆ.
ಪುರುಷ ಪ್ರಯತ್ನ-ಇದನ್ನು ವಿಂಗಡಿಸಿ ವಿವರಿಸುವ ಕಷ್ಟ ಬೇಕಿಲ್ಲ, ಸರಳವಾಗಿ ಹೇಳುವುದಾದರೆ ಎಂದಾದರೂ ನಾವು ದೂರದ ಊರಿಗೆ ಪ್ರಯಾಣಿಸುವಾಗ ಹಸಿರು ಕಾಡು, ಜುಳುಜುಳು ಹರಿಯುವ ನೀರು, ಧುಮುಕುವ ಜಲಪಾತ, ಚಿಕ್ಕಚಿಕ್ಕ ಗುಡ್ಡ, ದೊಡ್ಡ ಬೆಟ್ಟಗಳ ಸಾಲು, ಕಣ್ ಹರಿಯುವಷ್ಟೂ ಕಾಣುವ ಸಾಗರ ಇವೆಲ್ಲಾ ಧರೆಯ ಸಹಜ ಸೃಷ್ಟಿ ಆದರೂ ಅದೆಷ್ಟು ತಾಳ್ಮೆಯಿಂದ ನಿಂತಿವೆ / ಸಾಗಿವೆ ಅಲ್ಲವೇ? ಆದರೆ ಅದೇ ಸಾವಿರಾರು ಅಡಿಎತ್ತರದ ದೂರದ ಬೆಟ್ಟದ ಮೇಲೊಂದು ಕಲ್ಲಿನಲ್ಲಿ ಕಟ್ಟಿದ ಪುಟ್ಟ ದೇಗುಲ, ಭೂಮಿಯನ್ನೇ ಇಬ್ಭಾಗ ಮಾಡುವಂತೆ ಹರಿಯುವ ನದಿಗೆ ನೂರಾರು ಅಡಿ ಉದ್ದದ ತೂಗುವ ಸೇತುವೆ, ದೇಶ ದೇಶಗಳು ಸಾವಿರಾರು ಮೈಲು ದೂರವಿದ್ದರೂ ತಲುಪಲು ಕಟ್ಟಿದ ದೋಣಿ, ಕಡಲಾಳದಿ ಧುಮುಕಿ ತರುವ ಮುತ್ತು, ಭೂಗರ್ಭದಿ ಇಳಿದು ಕಡಿದು ತರುವ ಚಿನ್ನ-ವಜ್ರ ಇನ್ನೂ ಹೇಳುತ್ತಾ ಹೊರಟರೆ ಪುರುಷ ಪ್ರಯತ್ನಕ್ಕೆ ಪುಟಗಳು ಸಾಲವು. ಅವಿಷ್ಕಾರಗಳು ಸಾವಿರಾರು ವರ್ಷಗಳಿಂದ ಆಗುತ್ತಾ ಬಂದಿದ್ದರೂ ಇತ್ತೀಚಿಗೆ ಸುಮಾರು ಇನ್ನೂರು ವರ್ಷಗಳಲ್ಲಿ ಉತ್ತುಂಗಕ್ಕೇರಿದೆಯಂದರೆ ಉತ್ಪ್ರೇಕ್ಷೆ ಆಗಲಾರದು. ಪುರುಷ ಅಂದ ಮಾತ್ರಕ್ಕೆ ಗಂಡಸರುಮಾತ್ರವಲ್ಲ ಇದು ಇಡೀ ಮಜಕುಲಕ್ಕೆ ಸಂಬಂಧಿಸಿದ್ದು.
“ಆಗದು ಎಂದು ಕೈಕಟ್ಟಿ ಕುಳಿತರೆ” ಇದು ಬಂಗಾರದ ಮನುಷ್ಯ ಚಿತ್ರದ ಒಂದು ಹಿಟ್ ಸಾಂಗ್, ಆದರೆ ಪ್ರಯತ್ನವೇ ಪಡದೆ “ಅಯ್ಯೋ ನನ್ನಿಂದಾಗದು” “ಆ ಕೆಲಸ ತುಂಬಾ ಕಠಿಣ” “ವಯಸ್ಸಿನಲ್ಲಿದ್ದಾಗ ನಾನು ಏನೇನು ಸಾಹಸ ಮಾಡಿದ್ದೆ ಗೊತ್ತಾ” “ಅರೆ ನಮಗ್ಯಾಕಿದ್ದೀತು ರಿಸ್ಕ್” “ಅಯ್ಯೋ ಟೈಮೇ ಇಲ್ಲಪ್ಪ,ಕೆಲಸ, ಮನೆ ಮಕ್ಕಳು” “ ಮನೆ ಕೆಲಸಕ್ಕೇ ಟೈಮಿಲ್ಲ ಇನ್ನು ಸಮಾಜಕ್ಕೆ!” “ ನೀವ್ ಬಿಡಿ ಅಧೇಗೆ ಟೈಮ್ ಮಾಡ್ಕೋತಿರಪ್ಪಾ” ಹೀಗೆ ಹತ್ತಾರು ಕಾರಣ ಕೇಳಿ ಬರುತ್ತದೆ. ಇದು ಸಾಮಾನ್ಯರ ಸಾಮಾನ್ಯ ನುಡಿ.
“ಮನಸ್ಸಿದ್ದರೆ ಮಾರ್ಗ” ಗಾದೆ ಕೇಳಿರಲೇಬೇಕು ನೀವು. ಗಾದೆ ಸುಳ್ಳಗಲ್ಲ ಅಂತಾನೂ ಕೇಳಿರಬೇಕು.ಆದರೆ ದೊಡ್ಡ ದೊಡ್ಡ ಯೋಜನೆ, ಸಾರ್ವಜನಿಕರಿಗಾಗಿ ಉದ್ಯೋಗ, ರೈತರ ಏಳಿಗೆ, ರಾಷ್ಟ್ರದ ಮುನ್ನಡೆಗೆ, ಅದೆಷ್ಟೋ ಯೋಜನೆಗಳು ಬರೀ ಗುದ್ದಲಿ ಪೂಜೆಯಲ್ಲೇ ಅಂತ್ಯಗೊಡಿವೆ, ಸರ್ಕಾರದ ನಿರ್ಲಕ್ಷ್ಯವೋ ಆರ್ಥಿಕ ಬಿಕ್ಕಟ್ಟು, ಸ್ಥಳೀಯರ ಪ್ರತಿಭಟನೆ – ಇನ್ನೂ ನಾಲ್ಕಾರು ಕಾರಣ ಇರಬಹುದು.ವಿಶ್ವೆಶ್ವರಯ್ಯನವರು ಪುರುಷಪ್ರಯತ್ನ,ಜೀವನೋತ್ಸಾಹ ಮತ್ತು ಲೋಕಸ್ನೇಹ ಎಲ್ಲಕ್ಕೂ ಹೊಂದುವ ಹೆಸರು/ವ್ಯಕ್ತಿ.
ಪ್ರಕೃತಿಯ ಸೃಷ್ಟಿಯನ್ನು ದೈವಾನುಗ್ರಹ ಎಂದು ನಂಬುವ ಬಹುತೇಕ ಜನ ಪ್ರಯತ್ನಕ್ಕೆ ಕೈ ಎತ್ತುವ (ನಿಷೇದಾರ್ಥ) ಸಾಧ್ಯತೆಯೇ ಹೆಚ್ಚು, ಎಲ್ಲವೂ ಭಗವಂತನೇ ಮಾಡಿ ಬಿಟ್ಟಿದ್ದರೆ ನಮಗೇನು ಕೆಲಸ? ಅವನಿತ್ತ ಚಿತ್ತದಲಿ ಶಕ್ತಿಯನು ಯುಕ್ತಿಯಲಿ ಬಳಸಿ impossible ಅನ್ನುವ ಶಬ್ದ ಇಂಗಿಸಬಹುದು.
ತಾಯಿ ತನ್ನ ಮಗುವಿಗೆ ಖಾಯಿಲೆ ಬಂದಾಗ ಹರಕೆ ಹೊತ್ತು ದೇವರ ಮುಂದೆ ಕೈಜೋಡಿಸಿ ಕೂಡುವುದಕ್ಕಿಂತ,ವೈದ್ಯರನ್ನು ಕಾಣುವ ಪುರುಷ ಪ್ರಯತ್ನ ಮಾಡುವುದು ಉಚಿತವಲ್ಲವೇ?. ನಂಬಿಕೆ ಇರಬೇಕು ಆದರೆ ಪ್ರಯತ್ನ ಬಿಡಬಾರದು.

ನಂಬಿಕೆಯ ಬಗ್ಗೆ ಪುಟ್ಟ ಪ್ರಸಂಗ / ಕಥೆ ಜ್ಞಾಪಕಕ್ಕೆ ಬಂತು, ಭೀಕರ ಚಂಡಮಾರುತಕ್ಕೆ ಸಿಲುಕಿದ ನೌಕೆಯಲ್ಲಿ ಬಹಳ ಜನಪ್ರಯಾಣಿಸುತ್ತಿದ್ದರು, ಎಲ್ಲರೂ ಭಯಭೀತರಾಗಿದ್ದರು, ಆದರೆ ಒಬ್ಬ Jewish ಸಂತ ಮಾತ್ರ ಧ್ಯಾನ ಮಾಡುತ್ತಾ ಕುಳಿತಿದ್ದ, ಆತನ ಹೆಂಡತಿ ಕೋಪದಿಂದ “ಸ್ವಾಮೀ ಎಲ್ಲರೂ ಹೆದರಿದ್ದಾರೆ ನಿಮಗೆ ಏನೂ ಅನ್ನಿಸಲಿಲ್ಲವೇ, ಭಯವಾಗುತ್ತಿಲ್ಲವೇ, ಹೇಳಿ”ಎಂದು ಗದರಿದಳು, ತಕ್ಷಣ ಆತ ತನ್ನ ಜೇಬಿನಿಂದ ಹರಿತವಾದ ಕತ್ತಿ ತೆಗೆದು ತನ್ನ ಪತ್ನಿಯ ಕತ್ತಿಗೆ ತಾಗುವಂತೆ ಹಿಡಿದು,”ಈಗ ಹೇಳು ನಿನಗೆ ಭಯ ಆಗುವುದಿಲ್ಲವೇ?” ಎಂದ. ಕಣ್ಣರಳಿಸಿ ಹುಬ್ಬೇರಿಸಿ ನಡುಗುವ ದ್ವನಿಯಲ್ಲಿ ಉತ್ತರಿಸಿದಳು “ಹರಿತವಾದ ಕತ್ತಿಕಂಡರೆ ಭಯ ಆಗುತ್ತದೆ, ಆದರೆ ಹಿಂದಿರುವ ನಿಮ್ಮ ಮೇಲೆ ನಂಬಿಕೆಇದೆ” ಎಂದಳು. ಅದಕ್ಕೆ ಆತ “ನನಗೂ ಹಾಗೇ ಚಂಡಮಾರುತ ಕಂಡರೆ ಭಯ ಆದರೆ ಅದರ ಹಿಂದಿರುವಾತನ ಮೇಲೆ ಅಪಾರ ನಂಬಿಕೆ” ಎನ್ನುತ್ತಾನೆ. ಆತ ಒಬ್ಬ ದೈವ ಭಕ್ತನಾಗಿದ್ದನು. ಎಲ್ಲರೂ ದೇವರನ್ನು ಪ್ರಾರ್ಥಿಸಿ ಎಂದಾಗ ಆಗಲಿ ನಾನು ಪ್ರಾರ್ಥಿಸುವೆ, ನೀವು ನೀರು ಹೊರಗೆ ಹಾಕುವುದನ್ನು ನಿಲ್ಲಿಸಬೇಡಿ ಎಂದನು.
ಪ್ರಯತ್ನಗಳು ಸ್ವಂತ ಉಪಯೋಗಕ್ಕೆ ಆಗಿದ್ದವು ಇಲ್ಲಿ ಲೆಕ್ಕಕ್ಕೆ ಬಾರವು, ಜನೋಪಯೋಗ, ಲೋಕಕಲ್ಯಾಣ, ತಂತ್ರಜ್ಞಾನ ಅವಿಷ್ಕಾರಗಳು ಯಾವುದೇ ಇರಲಿ ಅದನ್ನು ಮೊಟ್ಟಮೊದಲು ಮಾಡುವ ಅಥವಾ ಯಾರಿಗೆ ಅಂಥಾ ಪ್ರಯತ್ನ ಮಾಡುವ ಧೈರ್ಯ ಬುದ್ಧಿ – ಶಕ್ತಿ ಬರುತ್ತದೋ ಅದೇ ಪುರುಷಪ್ರಯತ್ನ, ಅದಿಲ್ಲವಾದಲ್ಲಿ ನಾವು ಅದೆಷ್ಟು ಹಿಂದಿರಬೇಕಿತ್ತೋ …….ಹಾಗಂತ ಮಾಡುವವರು ಮಾಡಲಿ ನಾವು ಮಾತ್ರ ಸುಮ್ಮನೆ ಕೂಡೋಣ ಅನ್ನೋದು ಒಳ್ಳೆಯದಲ್ಲ ಎಂಬುದು ನನ್ನ ನಂಬಿಕೆ.